Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/117

From Wikisource
This page has been proofread.

ಅವರೆಲ್ಲರೂ ಸದಸ್ಯರಾಗಿದ್ದಾರೆ. ಪ್ರಸ್ತುತ ಸಂತ ಪೌಲನ ದೇವಾಲಯದ ವ್ಯಾಪ್ತಿಯಲ್ಲಿ ಸುಮಾರು 45 ಕುಟುಂಬಗಳವರು ಈ ದೇವಾಲಯದ ಸದಸ್ಯರಾಗಿರುವುದು ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಿಂದ ಬರುವ ಕನ್ನಡ ತಿಳಿಯದ ಕ್ರೈಸ್ತ ವಿದ್ಯಾರ್ಥಿಗಳು ಇಲ್ಲಿನ ತಾತ್ಕಾಲಿಕ ಸದಸ್ಯರಾಗಿ ಆರಾಧನೆಗಳಲ್ಲಿ ಪಾಲ್ಗೊಳ್ಳುತ್ತಾರೆ.

ಬ್ರಿಟಿಷ್ ಸರಕಾರದ ಅಡಳಿತದಲ್ಲಿ ನಿರ್ಮಾಣವಾದ ಈ ದೇವಾಲಯವು ಬ್ರಿಟಿಷರ ಸ್ಮಾರಕಗಳನ್ನು ಉಳಿಸಿಕೊಂಡು ಮುಂದುವರಿದಿದೆ. ಮಂಗಳೂರಿನಲ್ಲಿ ಹೆಸರುವಾಸಿಯಾದ ಕಾಪಿ ಉದ್ಯಮ ಮೋರ್ಗನ್ ಸಂಸ್ಥೆ. ಇದರ ಕುಟುಂಬದ ಸದಸ್ಯರೋರ್ವರಾದ ಚಾರ್ಲ್ಸ್ ಹಂಗ್‌ಫೋರ್ಡ್ ಮೋರ್ಗನ್ 12 ವರ್ಷಗಳ ಕಾಲ ಈ ದೇವಾಲಯದ ಆಡಳಿತ ಮಂಡಳಿ ಸದಸ್ಯರಾಗಿದ್ದರು. 1928ರಲ್ಲಿ ನಿಧನರಾದ ಇವರ ಸ್ಮಾರಕವು ದೇವಾಲಯದ ಸ್ಮಶಾನ ಭೂಮಿಯಲ್ಲಿರುವುದು ಮಾತ್ರವಲ್ಲದೆ ಅವರ ಹೆಸರಿನ ಹಿತ್ತಾಳೆಯ ಫಲಕವೊಂದನ್ನು ದೇವಾಲಯದೊಳಗೆ ಅಳವಡಿಸಲಾಗಿದೆ. ಎಲ್ಯ ದೊರೆ ಎಂದೆ ಹೆಸರುವಾಸಿಯಾಗಿರುವ ಇವರು ತಮ್ಮ ಜೀವಿತಾವಧಿಯಲ್ಲಿ ತನ್ನ ಮಡದಿ ಹೆಸರಿನಲ್ಲಿ ಮಂಗಳೂರಿನಲ್ಲಿದ್ದ ಲೇಡಿಗೋಷನ್ ಆಸ್ಪತ್ರೆಯ ಮಹಿಳಾ ಮಕ್ಕಳ ವಿಭಾಗದ ಅಭಿವೃದ್ಧಿ ಕಾರ್ಯಕ್ಕೆ ರೂ.7,500/ ನೀಡಿದ್ದರು ಎಂದು ಚರಿತ್ರೆ ಹೇಳುತ್ತದೆ.

ಮಂಗಳೂರಿನ ಅಭಿವೃದ್ಧಿಗೆ ಬಾಸೆಲ್ ಮಿಶನ್ ನೀಡಿದ ಕೊಡುಗೆಯ ಹಿಂದೆ ಈ ದೇವಾಲಯದ ಪಾತ್ರ ಬಹಳಷ್ಟಿದೆ. 1840ರಲ್ಲಿ ಬಲ್ಮಠದ ಆಸ್ತಿಯನ್ನು ಬಾಸೆಲ್ ಮಿಶನ್‌ಗೆ ದಾನವಾಗಿ ನೀಡಿದವರು ಆಗಿನ ಜಿಲ್ಲಾ ಕಲೆಕ್ಟರ್ ಆಗಿದ್ದ ಎಚ್. ಎಮ್. ಭೇರ್. ಇವರು ಈ ದೇವಾಲಯದ ಸದಸ್ಯರಾಗಿದ್ದರು. ಮಂಗಳೂರಿಗೆ ಬರುವ ಕ್ರೈಸ್ತ ಆಧಿಕಾರಿಗಳು ಈ ದೇವಾಲಯಕ್ಕೆ ಆರಾಧನೆಗೆ ಹೋಗಬೇಕಾಗಿತ್ತು. 175 ಸಂವತ್ಸರಗಳನ್ನು ದಾಟಿದ ಈ ದೇವಾಲಯವು 2 ಶತಮಾನದ ಇತಿಹಾಸವನ್ನು ಹೊಂದಿದೆ. ಮಂಗಳೂರಿನಲ್ಲಿ ಬ್ರಿಟಿಷರು, ಬಾಸೆಲ್‌ ಮಿಶನ್, ವಿದೇಶಿ ಸಂಸ್ಥೆಗಳು, ಬಾಸೆಲ್ ಮಿಶನ್ ಇಂಗ್ಲಿಷ್ ಶಾಲೆ ಮುಂತಾದ ವಿಭಾಗಗಳಲ್ಲಿ ಮಹತ್ವದ ಅಕರಗಳನ್ನು ಹೊಂದಿರುವ ಈ ದೇವಾಲಯ ಮತ್ತು ಅದರ ಆಡಳಿತದಲ್ಲಿರುವ ಸ್ಮಾರಕಗಳನ್ನು ಸಂರಕ್ಷಿಸಿ, ಚರಿತ್ರೆಯನ್ನು ದಾಖಲೀಕರಣ ಮಾಡಬೇಕಾಗಿದೆ.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

105 a