Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/122

From Wikisource
This page has been proofread.

ನಾಲ್ಕು ವರ್ಷವೂ ಅವರ ಮನೆಯ ಪಕ್ಕದಲ್ಲಿ ವಾಸಿಸುತ್ತಿದ್ದ ನನಗೆ ಆದ ಅನುಭವಗಳನ್ನೇ ಒಂದೊಂದು ಲೇಖನ ಬರೆಯಬಹುದು. ಈ ಲೇಖನ ಬರೆಯಲು ಅವರೇ ಸ್ಫೂರ್ತಿ ಎಂದರೂ ತಪ್ಪಾಗಲಿಕ್ಕಿಲ್ಲ. ಯಾವಾಗಲಾದರೊಮ್ಮೆ ಮಧ್ಯರಾತ್ರಿ ಸಂದರ್ಭದಲ್ಲಿ ಹಾವನೂರರ ಮನೆಯ ಲೈಟೇನು ಉರಿಯುತ್ತಿದೆ ಎಂದು ಕಿಟಕಿಯಲ್ಲಿ ಇಣಕಿದರೆ ಕುಳಿತು ಬರೆಯುತ್ತಿರುತಿದ್ದರು. ಏನ್ ಸಾರ್ ನಿದ್ದೆ ನಿದ್ರೆ ಬರಲ್ವದು ತಮ್ಮಾ ಕೈಯಲ್ಲಿ ಹಿಡಿದ ಕೆಲಸ ಮುಗಿಸದೆ ಇದ್ದರೆ ನಾನು ಹೀಗೆಯೇ ಅಂದು ಬಾ ಚಾ ಕುಡಿಯುವ ಅಂತ ಕರೆಯುತ್ತಿದ್ದರು.

ಕೆಲವು ಹಬ್ಬ ಹರಿದಿನಗಳಿಗೆ ಬೆಂಗಳೂರಿಗೆ ಹೋಗುತ್ತಿದ್ದ ಇವರು ಕೆಲವು ಹಬ್ಬಗಳ ಸಂದರ್ಭದಲ್ಲಿ ಮನೆಯಲ್ಲಿಯೇ ಇರುತ್ತಿದ್ದರು. ಏನ್ ಸಾರ್ ಹಬ್ಬ ಇಲ್ಲವಾ ಅಂದರೆ ಸಾಹಿತಿಗಳಿಗೆ ದಿನವೆಲ್ಲಾ ಹಬ್ಬ ಎನ್ನುತ್ತಿದ್ದರು. ಕೆಲವೊಂದು ಹಬ್ಬಗಳ ಸಂದರ್ಭದಲ್ಲಿ ಪಾಯಸವೋ, ಸಿಹಿತಿಂಡಿಯೋ ಬಂದವರಿಗೆ ಹಂಚುವುದುಂಟು, ತುಳಸಿ ಪೂಜೆಯ ದಿನದ ಬೆಳಗ್ಗೆ ಏನ್ ಸಾರ್ ನಿಮ್ಮ ಮನೆ ಮುಂದೆ ತುಳಸಿ ಗಿಡ ನೆಟ್ಟದ್ದೇನೆ ಏನು ನಿಮಗೆ ತುಳಸಿ ಪೂಜೆಯೂ ಇಲ್ಲವಾ ಅಂದೆ. ಅಂದು ಸಂಜೆ ನನ್ನ ಕುಟುಂಬದವರಿಗೆ ಬುಲಾವ್! ಯಾಕೆ ಗೊತ್ತೆ! ತುಳಸಿ ಪೂಜೆಗೆ! ತುಳಸಿ ಗಿಡದ ಹತ್ತಿರ ನೆಲದಲ್ಲಿ ಕುಳಿತು ಪೂಜೆ ಸಲ್ಲಿಸಿ ನಮಗೆಲ್ಲ ಮೂಸಂಬಿ, ಕಲ್ಲು ಸಕ್ಕರೆ, ಅವಲಕ್ಕಿ ಹಂಚಿದ್ದು ಈಗಲೂ ನೆನಪಾಗುತ್ತದೆ. ಮನೆಯಲ್ಲಿ ರಾಘವೇಂದ್ರ ಸ್ವಾಮಿ ಮುಂತಾದ ಹಲವಾರು ಫೋಟೋಗಳಿತ್ತು, ನಿತ್ಯ ಮೊಣಕಾಲೂರಿ ವಂದನೆ ಸಲ್ಲಿಸುತ್ತಿದ್ದುದನ್ನು ಕಿಟಿಕಿಯಿಂದಲೇ ನೋಡಿದ್ದೆ.ಪ್ರಯಾಣ ಹೊರಡುವಾಗಂತೂ ಇದು ತಪ್ಪದೇ ಇರುತ್ತಿತ್ತು.

ಹಾವನೂರರು ಬೆಂಗಳೂರಿಗೆ ಹೋಗುವಾಗ ನಾನು ಸ್ಕೂಟರ್‌ನಲ್ಲಿ ಬಸ್‌ಸ್ಟಾಂಡ್ ತನಕ ಬಿಡುವ ಕ್ರಮವಿತ್ತು. ಹೆಗಲ ಮೇಲೆ ಚೀಲ ಹಾಕಿಕೊಂಡು ಎರಡು ಕಾಲು ಒಂದೇ ಬದಿಗೆ ಹಾಕಿ ಕುಳಿತುಕೊಳ್ಳುವ ಸಾರ್ ತಾನು ಎಳೆದು ಕೊಂಡು ಬಂದಿದ್ದ ಸೂಟ್‌ಕೇಸನ್ನು ತನ್ನ ತೊಡೆ ಮೇಲಿರಿಸುವದನ್ನು ನೋಡಿದರೆ ನನಗೇ ಆಶ್ಚರ್ಯವಾಗುತ್ತಿತ್ತು. ಬಸ್‌ಸ್ಟಾಂಡ್ ತಲುಪಿದ ಕೂಡಲೇ ನೀನು ಹೋಗು ತಮ್ಮಾ ಹುಡುಗರು ಕಾಯ್ತಾರೆ ಇನ್ನೇನು ಬಸ್‌ ಬರುತ್ತದೆ ಎಂದಾಗ ಇರಲಿ ಸಾ‌ ಬಸ್ ಬಂದ ಮೇಲೆ ನಿಮ್ಮ ಸೂಟ್‌ಕೇಸ್ ಬಸ್ ಮೇಲೆ ಕೊಟ್ಟು ಹೋಗುತ್ತೇನೆ ಅಂದರೆ, ಬೇಡ ತಮ್ಮಾ ಅದು ಏನೂ ವಜ್ಜ ಇಲ್ಲ ನೋಡು ಎಂದು ಎತ್ತಿ ತೋರಿಸಿ ನನ್ನನ್ನು ಹಿಂದೆ ಕಳುಹಿಸುತ್ತಿದ್ದರು. ಆಗ ನಾನು ಎಣಿಸಿದ್ದು ಟಿ.ವಿ.ಯನ್ನು ಪಂಚೆಯಲ್ಲಿ ಸುತ್ತಿ ತೊಡೆ ಮೇಲಿರಿಸಿಕೊಂಡು ಬೆಂಗಳೂರಿಂದ ಮಂಗಳೂರಿಗೆ

110

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...