Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/124

From Wikisource
This page has been proofread.

ಹೆಸರು ಗಳಿಸಿರುವ ಇವರು ಒಬ್ಬ ನಿಜ ಪುಸ್ತಕ ಪ್ರೇಮಿ.

ಇವರು ಪುಸ್ತಕ ಪ್ರೇಮಿಯಾಗಲು ಕಾರಣ ಇವರು ಗ್ರಂಥಪಾಲಕರಾಗಿ ಸೇವೆ ಮಾಡಿದುದೇ ಎಂಬುದು ನನ್ನ ಅನಿಸಿಕೆ. ದಾಖಲೀಕರಣ, ಸಂಶೋಧನೆ, ಪ್ರಕಟಣೆ, ಜೋಪಾನ, ಮಾರ್ಗದರ್ಶನ, ಇವು ಗ್ರಂಥಪಾಲಕನಲ್ಲಿರಬೇಕಾಗಿರುವ ಗುಣಗಳು ಎನ್ನುತಿದ್ದ ಇವರು “ನೋಡು ತಮ್ಮಾ ಗ್ರಂಥಪಾಲಕನೆಂದರೆ ಗ್ರಂಥ ಕಾಯುವವನಲ್ಲ ಓದುಗನೊಬ್ಬ ವಿಷಯವನ್ನರಸಿ ಬಂದಾಗ ಯಾವುದೇ ರೀತಿಯಲ್ಲಾದರೂ ಅವನಿಗೆ ಮಾಹಿತಿ ಒದಗಿಸುವ ಕಾರ್ಯವನ್ನು ಹೇಗಾದರೂ ಮಾಡಬೇಕು. ಪುಸ್ತಕಗಳು ನಮ್ಮನ್ನು ಮಾತನಾಡಿಸುತ್ತದೆ. ಮುದ್ರಣಗೊಂಡ ಪ್ರತಿ ಪುಸ್ತಕಕ್ಕೂ ಓದುಗರು ಇದ್ದೇ ಇದ್ದಾರೆ. ಸಾವಿರಾರು- ಲೇಖನ ನಿಯತಕಾಲಿಕೆಗೆ ಬರಿ ಅದು ದಾಖಲೆಯಾವುದಿಲ್ಲ, ಅದು ಗ್ರಂಥಾಲಯದಲ್ಲಿ ಸಿಗುವುದೂ ಇಲ್ಲ. ಆದರೆ ಪುಸ್ತಕ ಬರಿ ಅದು ಎಷ್ಟು ವರ್ಷ ಹೋದರೂ ಎಲ್ಲಿಯಾದರೂ ಒಂದು ಕಡೆ ಸಿಕ್ಕೆ ಸಿಗುತ್ತದೆ. ಅದಕ್ಕಾಗಿ ಯಾವುದೇ ಪುಸ್ತಕವು ನಿಷ್ಟ್ರಯೋಜಕವೆನಿಸುವುದಿಲ್ಲ. ಅಯಾಯ ಗ್ರಂಥಾಲಯದಲ್ಲಿ ತಮ್ಮ ಇತಿಮಿತಿಯಲ್ಲಾದರೂ ಹಳೆಯ, ಸಿಗದೇ ಇರುವ ಯಾವುದೇ ಪುಸ್ತಕವನ್ನು ಜೋಪಾನ ಮಾಡಬೇಕು. ದಾಖಲೀಕರಣ, ಜೋಪಾನ ಇವುಗಳಿಂದ ನಮಗೇನು ಲಾಭವೆಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಒಂದು ವಿಷಯವನ್ನು ಓದುಗನಿಗೆ ಒದಗಿಸುವ ಸೇವಯನ್ನಾದರೂ ಮಾಡಿದರೆ ಪ್ರತಿ ಸಂಘ, ಸಂಸ್ಥೆ, ಶಾಲೆಗಳು ತಮ್ಮಲ್ಲಿರುವ ಗ್ರಂಥಾಲಯಗಳನ್ನು ಸಾರ್ಥಕ ಪಡಿಸಿ ಕೊಳ್ಳಬಹುದು” ಎನ್ನುತ್ತಿದ್ದರು.

ಗ್ರಂಥ ಮಾರ್ಗದರ್ಶನದಲ್ಲಿ ಅವರದ್ದು ಎತ್ತಿದ ಕೈ. ಯಾರೇ ಒಂದು ವಿಷಯದ ಮೇಲೆ ಗ್ರಂಥಗಳನ್ನು ಅರಸಿಕೊಂಡು ಬರಲಿ ಅದನ್ನು ಹೇಗಾದರೂ ಮಾಡಿ ಓದುಗನಿಗೆ ಸಮಾಧಾನವಾಗುವ ರೀತಿಯಲ್ಲಿ ಮಾಹಿತಿ ಒದಗಿಸುವ ಕಾರ್ಯ ಮಾಡುತ್ತಿದ್ದರು. ಹಲವಾರು ಗ್ರಂಥಾಲಯದ ಸಂಬಂಧವನ್ನು ಇಟ್ಟುಕೊಂಡ ಇವರು ಅಲ್ಲಿ ನೋಡುವ ಅಲ್ಲಿ ಸಿಗಬಹುದು ಎನ್ನುತ್ತಿದ್ದ ಇವರು ಮಂಗಳೂರು ಎ.ವಿ.ಯ. ಡಾ. ಬಂಡಿ, ಅಲೋಸಿಯಸ್‌ನ ಡಾ. ರಾಡ್ರಿಗಸ್, ಆರ್. ಆರ್. ಸಿ.ಯ ಶ್ರೀ ವೆಂಕಟೇಶ್, ಸ್ವಿಜರ್ಲೆಂಡಿನ ಬಾಸೆಲ್ ಪತ್ರಾಗಾರದ ಪ್ರೊ. ಪೌಲ್ ಜೆನ್‌ಕಿನ್ಸ್, ಕೆ.ಟಿ.ಸಿ.ಯ ಬೆನೆಟ್ ಅಮ್ಮನ್ನ ಮುಂತಾದವರ ನೇರ ಸಂಪರ್ಕವಿಟ್ಟುಕೊಂಡಿದ್ದವರು. ಇವರು ಬ್ರಿಟಿಶ್ ಮ್ಯೂಸಿಯಂ, ಧರ್ಮಸ್ಥಳದ ಖಾವಂದರ ಪತ್ರಾಗಾರ, ಮಿಥಿಕ್ ಸೊಸೈಟಿ, ಹೀಗೆ ಹಲವಾರು ಗ್ರಂಥಾಲಯ ಪತ್ರಾಗಾರಗಳನ್ನು ತಮ್ಮ ಸಂಶೋಧನೆಯಲ್ಲಿ ಬಳಸಿಕೊಂಡಿರುವುದು ಮಾತ್ರವಲ್ಲದೆ ಓದುಗನಿಗೆ ಈ ಮೂಲಕ ಪೂರ್ಣ ಸಹಕಾರ ನೀಡಿದ್ದಾರೆ.

112

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...