Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/25

From Wikisource
This page has been validated.

ಪ್ರಾರಂಭ ಮಾಡಲಾಗಿ ಪ್ರೆಸ್‌ ಅಭಿವೃದ್ಧಿ ಹೊಂದಿತು. ಆಗ ಕೆಲಸಕ್ಕಿದ್ದವರು 28 ಮಂದಿ (12 ಮಂದಿ ಮೊಳೆ ಜೋಡಿಸುವವರು, 6 ಮಂದಿ ಭಾಷಿಸುವವರು, 5 ಜನ ಮೊಳೆ ಹೊಯ್ಯುವವರು, ಇಬ್ಬರು ಮೊಳೆ ಕೆತ್ತುವವರು.) 1860ರಲ್ಲಿ ಹೊರಗಿನ ಕೆಲಸ ಕಿಟ್ಟೆಲ್ ಹಾಗೂ ಮೋಗ್ಲಿಂಗ್ ಬರಹಗಳು ಇಲ್ಲಿಮುದ್ರಣಗೊಳ್ಳುತ್ತಿದ್ದುದರಿಂದ ಕೆಲಸಕ್ಕೇನು ಕೊರತೆ ಇರಲಿಲ್ಲ. ಈ ತನಕ ತುಳು ಕಂಟ್ರ, ಕೆನರಾ ಎಂದಿದ್ದ ಜಿಲ್ಲೆ ಇಬ್ಬಾಗವಾಗಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಾಯಿತು. ಆಗ ಮಂಗಳೂರಿನಲ್ಲಿ ಮತ್ತು ಸಿರ್ಸಿಯಲ್ಲಿ ಸರಕಾರದ 2 ಪ್ರೆಸ್ ಆರಂಭವಾಯಿತು. ಈ ಎರಡು ಪ್ರೆಸ್‌ಗೆ ಅಚ್ಚುಮೊಳೆಗಳನ್ನೂ, ಮುದ್ರಣ ಸಾಮಾಗ್ರಿಗಳನ್ನೂ, ತರಬೇತಿ ಪಡೆದ ಕೆಲಸಗಾರರನ್ನೂ ಬಾಸೆಲ್ ಮಿಶನ್ ಪ್ರೆಸ್ ಕೊಡಬೇಕಾಯಿತು. 1861ರಿಂದ ಪುಸ್ತಕ ಮಾರಾಟ ಮಾಡಲು ಪ್ರತ್ಯೇಕ ಬುಕ್ ಶಾಪ್ ಆರಂಭವಾಯಿತು. 1859ರಲ್ಲಿ ಬಾಸೆಲ್ ಮಿಶನ್ ಟ್ರೇಡಿಂಗ್ ಸಂಸ್ಥೆ (Basel Mission Trading Company) ಪ್ರಾರಂಭಗೊಂಡು ಬಾಸೆಲ್ ಮಿಶನ್ ನಡೆಸುತ್ತಿದ್ದ ಪ್ರಿಂಟಿಂಗ್ ಪ್ರೆಸ್, ನೇಯಿಗೆ, ಹಂಚಿನ ಕಾರ್ಖಾನೆಗಳು ಇದರ ವ್ಯಾಪ್ತಿಗೊಳಗಾಯಿತು. ವಿದೇಶಿ ಹಾಗೂ ದೇಶೀ ಪಾಲುದಾರರ (share holders) ಕೈಜೋಡಿಸುವಿಕೆಯಿಂದ ಇದು ಮುಂದುವರಿಯುತ್ತಿತ್ತು. ಈ ಪ್ರತ್ಯೇಕ ವ್ಯವಸ್ಥೆಯಿಂದ ಕಾರ್ಖಾನೆಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಆಮದು ರಫ್ತುಗಳು ಹೆಚ್ಚಾದವು. 1862 ವಿಲಾಯತಿಯಿಂದ ಹೊಸ ಯಂತ್ರ ತರಿಸಲಾಯಿತು. ತಲಚೇರಿಯಲ್ಲಿದ್ದ ಮಿಶನ್ ಪ್ರೆಸ್ ಮುಚ್ಚಿ ಮಲಯಾಳಂ ಮುದ್ರಣವು ಸಹಾ ಮಂಗಳೂರಿನಲ್ಲಿಯೇ ಮುಂದುವರಿಯಿತು.

1865ರಲ್ಲಿ ಮಂಗಳೂರಿನಲ್ಲಿ ಹೊಸ ನಮೂನೆಯ ಹಂಚು ತಯಾರಿಕಾ ಕಾರ್ಖಾನೆ ಅಸ್ಥಿತ್ವಕ್ಕೆ ಬಂದು ಮಂಗಳೂರಿನ ಜಪ್ಪುವಿನಲ್ಲಿ ಮೊದಲ ಹಂಚು ಕಾರ್ಖಾನೆ ಆರಂಭವಾಗಿ ತುಳುನಾಡಿನಲ್ಲಿ 'ಮಂಗಳೂರು ಹಂಚು" ಪ್ರಚಾರಕ್ಕೆ ಬಂತು. ಇದರ ರುವಾರಿ ಬಾಸೆಲ್ ಮಿಶನ್ ಪ್ರೆಸ್‌ನಲ್ಲಿ ಮುದ್ರಣ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಿದ ಸಿ.ಜಿ. ಎ. ಫೆಬ್‌ರವರೇ ಆಗಿದ್ದಾರೆ.

1866ರಲ್ಲಿ ಕನ್ನಡ ಮತ್ತು ಮಲಯಾಳಂ ಅಚ್ಚುಮೊಳೆಗಳು ಬಾಸೆಲ್‌ನಲ್ಲಿ ಕೆತ್ತಿಸಲ್ಪಟ್ಟು ಇಲ್ಲಿ ಹೊಯಿಸಲಾಯಿತು (ಬಾಸೆಲ್ ಟೈಪ್), 1868ರಲ್ಲಿ ಫೆಡರರ್ ನಾಯಕತ್ವದಲ್ಲಿ ಪುಸ್ತಕ ಮಾರಾಟದ ವ್ಯವಸ್ಥೆಯನ್ನು ಪ್ರತ್ಯೇಕಿಸಲಾಯಿತು. ಇದು ಬಾಸೆಲ್ ಮಿಶನ್ ಬುಕ್ ಎಂಡ್ ಟ್ರ್ಯಾಕ್ಟ್ ಡಿಪೊಸಿಟರಿ (Basel Mission Book

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.
13