Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/70

From Wikisource
This page has been validated.

ವಿಭಾಗದಲ್ಲಿಯೂ ಮಾಹಿತಿಗಳನ್ನು ಕಲೆಹಾಕಿ ಪ್ರಕಟಿಸುತ್ತಿತ್ತು. ಸಂಶೋಧನೆ ನಡೆಸುವವರಿಗೆ ಶಾಸನ, ತಾಮ್ರಪತ್ರ, ತಾಳೆಗರಿ, ಹಸ್ತಪ್ರತಿ, ಬಾಯ್ದೆರೆ,ಮುದ್ರಿತ ಪುಸ್ತಕಗಳು ಹೇಗೆ ಪ್ರಾಮುಖ್ಯವೋ ಹಾಗೆಯೇ ಹಿಂದಿನ ಪತ್ರಿಕೆಗಳೂ ಸಹಕಾರಿಯಾಗಿವೆ. ಪತ್ರಿಕೆಗಳಲ್ಲಿ ಆಗಿನ ಚರಿತ್ರೆ, ಜನಜೀವನ, ಭಾಷೆ, ಸಂಸ್ಕೃತಿ, ಕೃಷಿ, ವಿಜ್ಞಾನ, ಮುಂತಾದ ಹಲಾವಾರು ವಿಭಾಗಗಳಲ್ಲಿ ಮಾಹಿತಿಗಳು ಸಿಗುತ್ತವೆ. ಗ್ರಂಥಗಳನ್ನು ಜೋಪಾನ ಮಾಡುವಂತೆ ಪತ್ರಿಕೆಗಳನ್ನು ಜೋಪಾನ ಮಾಡುವ ಕ್ರಮ ನಮಲ್ಲಿ ಬಂದಿಲ್ಲವಾದ್ದರಿಂದ ಕೆಲವಾರು ವಿಚಾರಗಳಲ್ಲಿ ದಾಖಲೆಯೇ ಸಿಗದ ಪರಿಸ್ಥಿತಿ ಉಂಟಾಗಿದ್ದು ಶೋಚನೀಯವಾಗಿದೆ. ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳು ಒಟ್ಟು ಸೇರಿ ಗ್ರಂಥಗಳಾಗಿವೆ. ಕನ್ನಡ ನಾಡಿನಲ್ಲಿ ಪ್ರಕಟಗೊಂಡ ನೂರಾರು ಪತ್ರಿಕೆಗಳು ಈಗ ಅಲಭ್ಯವಾಗಿದ್ದು ಚರಿತ್ರೆಗೆ ಸೇರಿವೆ. ಕನ್ನಡದ ಮೊದಲ ಹಂತದ ಪತ್ರಿಕೆಗಳ ಚರಿತ್ರೆ ಬರೆಯುತ್ತಾ ಹೋದರೆ ಪುಸ್ತಕವನ್ನೇ ಬರೆಯಬೇಕಾಗುವುದು. ಈ ನಿಟ್ಟಿನಲ್ಲಿ ಮುದ್ರಣ ಮತ್ತು ಪತ್ರಿಕಾ ಕ್ಷೇತ್ರದಲ್ಲಿ ಅಡಿಗಲ್ಲನಿಟ್ಟ ವಿದೇಶಿ ಮಿಶನರಿಗಳ ನಾಯಕತ್ವದಲ್ಲಿ ಪ್ರಕಟಗೊಳ್ಳುತ್ತಿದ್ದ ಕೆಲವು ಪತ್ರಿಕೆಗಳ ಪರಿಚಯ ಮಾಡುವುದರಿಂದ ಕನ್ನಡ ಪತ್ರಿಕೋದ್ಯಮದ ಮೊದಲ ದಿನಗಳನ್ನು ಪರಿಚಯಿಸಲು ಈ ಲೇಖನದಲ್ಲಿ ಪ್ರಯತ್ನಿಸಲಾಗಿದೆ.

177 ವರ್ಷಗಳ ದೀರ್ಘ ಇತಿಹಾಸ ಹೊಂದಿರುವ ಕನ್ನಡ ಪತ್ರಿಕೋದ್ಯಮ ಪ್ರಾರಂಭವಾದದ್ದು ತುಳುನಾಡಿನ ಮಂಗಳೂರಿನಲ್ಲಿ ಎನ್ನುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರ. 1843ರಲ್ಲಿ 'ಮಂಗಳೂರ ಸಮಾಚಾರ' ವೆಂಬ ಹೆಸರಿನಲ್ಲಿ ಪ್ರಾರಂಭಗೊಂಡ ಕನ್ನಡ ಪಾಕ್ಷಿಕ (ತಿಂಗಳಿಗೆರಡಾವರ್ತಿ)ಪತ್ರಿಕೆಯಿಂದ ಕನ್ನಡ ಪತ್ರಿಕೋದ್ಯಮ ಚರಿತ್ರೆ ಕರ್ನಾಟಕದಲ್ಲಿ ಆರಂಭವಾಗುತ್ತದೆ. ಪಾಶ್ಚಾತ್ಯ ಪ್ರಪಂಚದಲ್ಲಿ ಜನಜೀವನದ ಮೇಲೆ ಮುದ್ರಣದ ಪ್ರಭಾವವು ಮೂರು ನಾಲ್ಕು ಶತಮಾನಗಳಿಂದ ಉಂಟಾಗಿದ್ದರೂ ನಮ್ಮಲ್ಲಿ ಈ ವ್ಯವಸ್ಥೆ ಒಂದೂವರೆ ಶತಮಾನದ ಈಚಿನದು. ಈ ಸೌಲಭ್ಯವನ್ನು ಒದಗಿಸಿಕೊಟ್ಟವರು ಪಾಶ್ಚಾತ್ಯರು. ಕ್ರೈಸ್ತ ಮತ ಪ್ರಚಾರಕ್ಕಾಗಿ ಬಂದ ಇವರು ಮೊದಲು ಇಲ್ಲಿ ಕಲ್ಲಚ್ಚಿನ ಮುದ್ರಣವನ್ನು ಬೆಳಕಿಗೆ ತಂದರು. ತದನಂತರ ಅಚ್ಚುಮೊಳೆಗಳ ಮುದ್ರಣವೂ ಆರಂಭವಾಯಿತು.

ಮದ್ರಾಸ್‌ ಆಧಿಪತ್ಯಕ್ಕೆ ಸೇರಿದ ತುಳು ಜಿಲ್ಲೆಯು ಆಂಗ್ಲರ ಆಳ್ವಿಕೆಯ ಕಾಲದ ಆರಂಭದಲ್ಲಿ ಶಿಕ್ಷಣ, ಕೈಗಾರಿಕೆ, ವ್ಯಾಪಾರ, ಕಲೆ, ವ್ಯವಸಾಯ, ಮೊದಲಾದ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೂ 1896ರವರೆಗೆ ಪತ್ರಿಕೋದ್ಯಮದಲ್ಲಿ ಮುಂದಡಿ ಇಟ್ಟಂತೆ ಕಂಡುಬರುತ್ತಿಲ್ಲ. ಸ್ವಿಜರ್ಲೆಂಡಿನ ಬಾಸೆಲ್‌ನಿಂದ 1834ರಲ್ಲಿ ಭಾರತಕ್ಕೆ ಬಂದ

58
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...