Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/79

From Wikisource
This page has been validated.

Mangalore Almanac ಎಂದು ನಮೂದಿಸಿದೆ. 1841ರಲ್ಲಿ ಬಾಸೆಲ್ ಮಿಶನ್ ಪ್ರೆಸ್ ಆರಂಭವಾದಾಗ ಅಲ್ಲಿದ್ದುದು ಕಲ್ಲಚ್ಚು ಮುದ್ರಣ. 1852ರಿಂದ ಲೆಟರ್ ಪ್ರೆಸ್ ಮುದ್ರಣ ಅರಂಭಗೊಂಡು ಕನ್ನಡ ಪಂಚಾಂಗವೂ ಅದರಲ್ಲಿಯೇ ಮುದ್ರಣಗೊಂಡಿತು. 25 ವರ್ಷಗಳಲ್ಲಿ 6000 ಪ್ರತಿಗಳಷ್ಟು ಮುದ್ರಿತವಾಗುತ್ತಿದ್ದು 80- ಪುಟಗಳನ್ನೊಳಗೊಂಡಿತ್ತು. 1873ರಲ್ಲಿ 2ನೇ ಮುದ್ರಣಕಂಡ ಪತ್ರಿಕೆ 1894ರಲ್ಲಿ 7000 ಪ್ರತಿಯಷ್ಟು ಮುದ್ರಣಗೊಂಡಿತ್ತು. ಪಂಚಾಂಗದ ಸಂಪಾದಕರಾಗಿ ದೇಶಿಯರಾದ ಬಾಲಪ್ಪಯ್ಯ, ಕ್ರಿಸ್ತಾನುಜ ವಾತ್ಸ, ಶಿವರಾವ್, ಮತ್ತು ಮಿಶನರಿಗಳಾದ M Hock, A. Manner, Stolz, ಮುಂತಾದವರು ಕೆಲಸ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉದ್ಯೋಗಸ್ತರು ಎಂಬ ಮಾಹಿತಿ ಇದ್ದಂತೆ, ಕೊಡಗು ಸೀಮೆಯ ಸರಕಾರದ ಉದ್ಯೋಗಸ್ತರು ಎಂಬ ಮಾಹಿತಿಯೂ ಇತ್ತು. ಆದ್ದರಿಂದ Coorg Edition ಎಂದು ಬೇರೆಯೇ ಆವೃತ್ತಿ ಪ್ರಕಟಗೊಳ್ಳುತ್ತಿತ್ತು.
ಕೆಲವು ವರ್ಷಗಳ ಪಂಚಾಂಗದ ಹಲವು ಪುಟಗಳ ಮಾದರಿ ಹೀಗಿವೆ.

1857-ಪಂಚಾಂಗದ ಕೊನೆಯಲ್ಲಿ ಸಮಾಪ್ತಿ ಎನ್ನುವ ಶೀರ್ಷಿಕೆಯ ಒಂದು ಪುಟವಿದೆ. ಇದು ಪ್ರಕಾಶಕರ ನಿವೇದನೆಯಾಗಿದ್ದು ಪತ್ರಿಕಾರಂಗಕ್ಕೆ ಸಂಬಂಧಪಟ್ಟದ್ದು.........ಕೆಲವೊಂದು ತಿಂಗಳುಗಳಲ್ಲಿ ವೊಂದು ವರ್ತಮಾನ ಪತ್ರಿಕೆಯನ್ನು ಪ್ರಕಟ ಮಾಡುವುದಕ್ಕೆ ಆಲೋಚಿಸಿ ಇರುವುದರಿಂದ ಇಲ್ಲಿ ಬಿಟ್ಟದ್ದನ್ನು ಬೇರೆ ಪ್ರಯೋಜನಕರವಾದ ಸಂಗತಿಗಳನ್ನೂ ಅಲ್ಲಿ ಛಾಪಿಸಿ ಅದರ ಮುಖ್ಯ ತಾತ್ಪರ್ಯ ಯಾವದಾಗಿದ್ದಿತೆಂದರೆ ರಾಜಕಾರ್ಯಗಳಲ್ಲಿ ಮುಖ್ಯ ಸಂಗತಿಗಳ ಸಂಕ್ಷೇಪ ವಿಚಾರ, ವಿದ್ಯಾವಿಷಯಗಳು, ಇದರ ಸಂಗಡ ಆಗುವಷ್ಟು ಸರ್ಕಾರದವರ ಮುಖ್ಯ ಕಟ್ಟುಕಟ್ಟಳೆಗಳು ವಿಶೇಷವಾದ ಹಿಸ್ಸಹಾರು ಮುಂತಾದವುಗಳು. ಈ ವರ್ತಮಾನ ಪತ್ರಿಕೆಗೆ ಪಂಚಾಂಗಕ್ಕಿಂತ ಸ್ವಲ್ಪ ಸಣ್ಣದಾಗಿರುವ ಹದಿನಾರು ಪುಟಗಳನ್ನು ಮಾಡ ನಿಶ್ಚಯಿಸಿದ್ದೇವೆ. ಈಗ ಪತ್ರಿಕೆ ತಕ್ಕೊಳ್ಳುವುದಕ್ಕೆ ಸಹಾ ಅನೇಕರು ವಂತಿಕೆ ಹಾಕುವುದಾದರೆ ಈ ಕಾರ್ಯ ನಡೆಸುವವರಿಗೆ ಬಹಳ ಧೈರ್ಯವಾದೀತು. ಕನ್ನಡ ಜಿಲ್ಲೆಯಲ್ಲಿ(ಅಂದರೆ ಈಗಿನ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳೂ ಸೇರಿ) ಪಂಚಾಂಗ ತಕ್ಕೊಳ್ಳುವವರು ಸುಮಾರು ಎಂಟುನೂರು ಮಂದಿ. ಅಷ್ಟೇ ಜನರು ವರ್ತಮಾನ ಪತ್ರಿಕೆಯನ್ನು ಸಹಾ ತಕ್ಕೊಳ್ಳುವುದಾದರೆ ಮಹಾ ಸಂತೋಷವಾದೀತು. ಅದಾಗ್ಯೂ ಓದುವವರು ನಮಗೆ ಅದರಿಂದ ಯೇನಾದರೂ ಹಣದ ಲಾಭ ಬರುತ್ತದೆಯೆಂಬದಾಗಿ ನೆನಸಬಾರದು. ನಿಶ್ಚಯವಾಗಿ ನಮಗೆ ಮುಟ್ಟುವ ಖರ್ಚು ಮಾತ್ರವೇ ನಮಗೆ ಶಿಕ್ಕುವುದೇ ಕಷ್ಟವಾಗಿರುತ್ತದೆ.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 67