Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/99

From Wikisource
This page has been proofread.

ತುಳುನಾಡಿನಲ್ಲಿ ಮೊದಲ ಪ್ರಾಥಮಿಕ ಶಾಲೆ (1836)

ಮಂಗಳೂರಿಗೆ 1834ರಲ್ಲಿ ಆಗಮಿಸಿದ ಬಾಸೆಲ್ ಮಿಶನರಿಗಳ ಮೂಲ ಉದ್ದೇಶ ಕ್ರೈಸ್ತ ಧರ್ಮದ ಮತಪ್ರಚಾರ ಮಾಡುವುದು. ಈ ಉದ್ದೇಶದಿಂದ ಇಲ್ಲಿಗಾಮಿಸಿದರೂ ಮೂಲ ಉದ್ದೇಶವನ್ನು ಸಾಧಿಸಲು ಸಾಧ್ಯವಾಗದೇ ಹೋದರೂ ಶಿಕ್ಷಣ, ಕೈಗಾರಿಕೆ, ಮುದ್ರಣ, ವೈದ್ಯಕೀಯ, ಕೃಷಿ, ಸಾಹಿತ್ಯ, ಸಂಸ್ಕೃತಿ ಮುಂತಾದ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡಿರುವುದು ತುಳು ನಾಡಿನ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿದಿದೆ. ಜಿಲ್ಲೆಯ ಜನರಿಗೆ ಶಿಕ್ಷಣ ನೀಡುವುದು ಕ್ರೈಸ್ತ ಧರ್ಮದ ಮೂಲತತ್ವ ಎಂಬುದು ಜನರಿಗೆ ತಾವು ಮಾಡುವ ಸೇವೆಯ ಒಂದು ಭಾಗವೆಂಬಂತೆ ಕರಾವಳಿ ಕರ್ನಾಟಕ ಮತ್ತು ಭಾರತದಲ್ಲಿ ಅದರ ಕಾರ್ಯಕ್ಷೇತ್ರವಿದ್ದಲ್ಲೆಲ್ಲಾ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ, ಸ್ಥಳೀಕ ಭಾಷೆ ಮತ್ತು ಸಾಹಿತ್ಯ ಕ್ಷೇತ್ರದ ಬೆಳವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬಾಸೆಲ್ ಮಿಶನ್ ಸಂಸ್ಥೆ ಮಾಡಿದ್ದ ಒಂದು ನಿಯಮದ ಪ್ರಕಾರ ಸ್ಥಳೀಯ ಕ್ರೈಸ್ತ ಮಕ್ಕಳ ಎಲ್ಲಾ ಹೆತ್ತವರು ತಮ್ಮ ಮಕ್ಕಳನ್ನು 14 ವರ್ಷ ವಯಸ್ಸಿನ ತನಕ ಶಾಲೆಗಳಿಗೆ ಕಳುಹಿಸುವುದು ಕಡ್ಡಾಯವಾಗಿತ್ತು. ಪ್ರಸ್ತುತ ಸರಕಾರವು ಜಾರಿಗೆ ತಂದಿರುವ ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀತಿಯನ್ನು ಬಾಸೆಲ್ ಮಿಷನ್ 170 ವರ್ಷಗಳ ಹಿಂದೆಯೇ ತನ್ನ ಕಾರ್ಯವ್ಯಾಪ್ತಿಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಜಾರಿಗೆ ತಂದಿರುವುದು ಅದರ ಹೆಗ್ಗಳಿಕೆಯಾಗಿದೆ.

1834ರಲ್ಲಿ ಭಾರತಕ್ಕೆ ಬಾಸೆಲ್ ಮಿಶನರಿಗಳು ಮಂಗಳೂರಿನಲ್ಲಿ 1836ರಲ್ಲಿ ಒಂದು ಪ್ರಾಥಮಿಕ ಶಾಲೆಯನ್ನು ತೆರೆದರು. ಈ ಶಾಲೆಯು ಇಡೀ ಕೆನರಾ ಜಿಲ್ಲೆಯಲ್ಲಿ ಆಧುನಿಕ ಶಿಕ್ಷಣ ವ್ಯವಸ್ಥೆಯ ನಿಯಮದಡಿಯಲ್ಲಿ ಆರಂಭಗೊಂಡ ಮೊದಲ ಕನ್ನಡ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ನಾಯಕತ್ವ ವಹಿಸಿದವರು ಭಾರತಕ್ಕೆ ಮೊದಲು ಬಂದ ಮೂವರು ಮಿಶನರಿಗಳಲ್ಲಿ ಒಬ್ಬರಾದ ರೆವೆ. ಸಾಮುವೆಲ್ ಹೆಬಿಕ್, ಇದು ಈಗಿನ ಮಿಶನ್ ಸ್ಟ್ರೀಟ್‌ನಲ್ಲಿ ಕಾರ್ಯವೆಸಗುತ್ತಿತ್ತು. ಶಾಲೆ ಮುಂದುವರೆಯುತ್ತಿದ್ದಂತೆ ಆಂಗ್ಲ ಮಾಧ್ಯಮ ಅಗತ್ಯತೆ, ಬೇಡಿಕೆ ಹೆಚ್ಚಿದ್ದರಿಂದ ಆಂಗ್ಲ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು......87