Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/102

From Wikisource
This page has been proofread.

ಹೈಸ್ಕೂಲ್‌ನ್ನು ಬಾಸೆಲ್ ಮಿಶನರಿಗಳು 1838ರಲ್ಲಿ ಸ್ಥಾಪಿಸಿದರು. ಇದಕ್ಕೆ ಮಿಶನ್ ಸ್ಕೂಲ್ ಎಂಬ ಹೆಸರಿತ್ತು. ಈ ಜಿಲ್ಲೆಯಲ್ಲಿ ಇಂಗ್ಲಿಷನ್ನು ಕಲಿಸುವುದಕ್ಕೆ ತೊಡಗಿದ ಶಾಲೆಗಳಲ್ಲಿ ಇದೇ ಮೊದಲನೆಯದು. ಈ ಶಾಲೆಯ ಸ್ಥಾಪನೆಯಾಗಲು ಕಾರಣ ಜಿಲ್ಲೆಯಲ್ಲಿದ್ದ ವಿದೇಶಿ ಮಕ್ಕಳು ಮತ್ತು ಆಸಕ್ತ ದೇಶಿಯರ ಮಕ್ಕಳು. 1914ರಲ್ಲಿ ನಡೆದ ಮೊದಲ ಮಹಾಯುದ್ಧ ಸಂದರ್ಭದಲ್ಲಿ ಈ ಶಾಲೆಯನ್ನು ಮುಚ್ಚುವ ಪರಿಸ್ಥಿತಿ ಬಂದೊದಗಿತು. ಈ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ತೀರಿಸಿ ಹೋದವರಲ್ಲನೇಕರು ಈಗ ವಿದ್ಯಾ ಇಲಾಖೆಯಲ್ಲಿಯೂ, ಮತ ಸಂಬಂಧ ಕೆಲಸದಲ್ಲಿಯೂ, ವಕೀಲ ವೃತ್ತಿಯಲ್ಲಿಯೂ, ಇನ್ನು ಕೆಲವರು ಸರಕಾರಿ ಅಧಿಕಾರಿಗಳಾಗಿ ಮೆರೆಯುವರು. ಅನೇಕಾನೇಕ ಬಡಬಗ್ಗರಿಗೂ ಹಿಂದುಳಿದ ಜಾತಿಯವರಿಗೂ ಈ ವಿದ್ಯಾಲಯವು ಧರ್ಮಾರ್ಥವಾಗಿಯಾಗಲಿ ಅರ್ಧ ಯಾ ಕಾಲು ಸಂಬಳವನ್ನು ಅಂಗೀಕರಿಸಿ ಯಾಗಲಿ ವಿದ್ಯಾದಾನ ಮಾಡಿಯದೆ. ಇದಲ್ಲದೆ ಇಲ್ಲಿ ದೊರೆಯುವ ನೈತಿಕ ಯಾ ಸನಾತನ ಬೋಧನೆಯು ಅನೇಕರ ಅಂತರಾತ್ಮನನ್ನು ಹೆಚ್ಚು ಜಾಗೃತಿಗೊಳಿಸಲು ಸಹಾಯಕಾರಿಯಾಗಿದೆ. ವಿಶೇಷತಃ ಶಾಲೆಯ ವಾರ್ಷಿಕ ಪರೀಕ್ಷೆಗಳ ಫಲಿತಾಂಶವು ಜಿಲ್ಲೆಯ ಬೇರೆ ಶಾಲೆಗಳ ಫಲಿತಾಂಶಕ್ಕಿಂತ ಎಷ್ಟು ಮಾತ್ರವು ಕಡಿಮೆ ತರದ್ದಲ್ಲ. “ಇಲ್ಲಿ ಕಲಿತು ಬೇರೆ ಬೇರೆ ಹುದ್ದೆಗಳಲ್ಲಿ ನೆಲೆಯೂರಿರುವ ಹಳೇ ವಿದ್ಯಾರ್ಥಿಗಳು, ಮತ್ತು ವಿದೇಶಿ ಅಧಿಕಾರಿಗಳ ನೆರವಿನಿಂದ ಶಾಲೆ ಮುನ್ನಡೆಯುವಂತಾಯಿತು” ಆಗ ಹೈಸ್ಕೂಲಿಗೆ ಕೆ.ಇ.ಎಮ್. ಹೈಸ್ಕೂಲ್ ಎಂಬ ಹೆಸರಿತ್ತು.

“ಕ್ರೈಸ್ತ ಹಿತವಾದಿ” ಎಪ್ರಿಲ್ 1925ರಲ್ಲಿ ಪ್ರಕಟವಾದ “ದ್ರವ್ಯ ಸಹಾಯ ಹೊಂದುವ ಪಾಠಶಾಲೆಗಳು” ಎಂಬ ಲೇಖನದಲ್ಲಿ ಶಾಲೆಯ ಬಗ್ಗೆ ಹೀಗೆ ದಾಖಲಿಸಲಾಗಿದೆ. ಈ ಈ ದೇಶದಲ್ಲಿ ಸರಕಾರಿ ಶಾಲೆಗಳಲ್ಲದೆ ಸರಕಾರದಿಂದ ಹಣ ಸಹಾಯ ಪಡೆಯುವ ಶಾಲೆಗಳೂ ಖಾಸಗಿ ಶಾಲೆಗಳೂ ಅವೆ. ಖಾಸಗಿ ಶಾಲೆಗಳನ್ನು ಅಯಾ ಸಮಾಜಗಳವರಾಗಲಿ ಇತರ ಮಹನೀಯರಾಗಲಿ ಪ್ರತ್ಯೇಕವಾದ ಒಂದು ಉದ್ದೇಶದಿಂದ ಇಟ್ಟು ಸ್ವಂತ ಖರ್ಚಿನಿಂದ ನಡೆಸುವಾಗ ಸರಕಾರದವರು ಅಂಥವುಗಳ ಆಡಳಿತೆ ನಡಿಸುವಿಕೆಗಳನ್ನು ಕುರಿತು ಕೈಹಾಕುವುದಿಲ್ಲ. ಆದರೆ ಸರಕಾರದಿಂದ ಮಂಜೂರಾತಿ ಹೊಂದಿ ಸಹಾಯ ಪಡೆಯುವ ಶಾಲೆಗಳು ಸರಕಾರಿ ನಿಯಮಗಳಿಗೆ ಒಳಗಾಗಬೇಕು. ಪಾಶ್ಚಿಮಾತ್ಯ ವಿದ್ಯೆಯನ್ನು ಕೊಟ್ಟು ಇಂಥಾ ದ್ರವ್ಯ ಸಹಾ ಹೊಂದುವ ಶಾಲೆಗಳಲ್ಲಿ ಮಿಶನ್ ಶಾಲೆಗಳೇ ಮೊದಲನೆಯವುಗಳು, ಇಂಥಾ ಶಾಲೆಗಳನ್ನು ಬಾಸೆಲ್ ಮಿಶ್ಯನಿನವರು ಈ ಜಿಲ್ಲೆಯಲ್ಲಿಯೂ ಇನ್ನು ಇತರ ಜಿಲ್ಲೆಗಳಲ್ಲಿಯೂ 80-90 ವರ್ಷಗಳ ಹಿಂದಿನ ಕಾಲದಲ್ಲಿಯೇ ಅಲ್ಲಲ್ಲಿ ಸ್ಥಾಪಿಸ

90

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು..