Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/16

From Wikisource
This page has been validated.

ತುಳುನಾಡಿನಲ್ಲಿ ಮಿಶನರಿಗಳು ಸ್ಥಾಪಿಸಿದ ಶಿಕ್ಷಣ ಕೇಂದ್ರಗಳ ಪರಿಸರದಲ್ಲಿ ಪ್ರಸ್ತುತ 21 ಪ್ರಾಥಮಿಕ, 6 ಹೈಸ್ಕೂಲ್, 3 ಕಾಲೇಜು, 3 ವಸತಿ ಶಾಲೆ, 4 ಬಾಲವಾಡಿ, 1ವಿಶೇಷ ಮಕ್ಕಳ ಶಾಲೆ, 4 ಹೊಲಿಗೆ ತರಬೇತಿ ಕೇಂದ್ರ, 1 ತಾಂತ್ರಿಕ ತರಬೇತಿ ಕೇಂದ್ರ, ಆಸ್ಪತ್ರೆ 1, ವೃದ್ಧಾಶ್ರಮ, 1 ವೈದಿಕ ಶಾಲೆ, 1 ಪ್ರೆಸ್, 3 ಇತರ ತರಬೇತಿ ಕೇಂದ್ರಗಳು ಮಂಗಳೂರಿನಲ್ಲಿ ಕೇಂದ್ರವಿರುವ ಕರ್ನಾಟಕ ಸದರ್ನ್ ಡಯಾಸಿಸ್ ಆಡಳಿತದಲ್ಲಿದ್ದರೆ, 8 ಶಾಲೆಗಳು ಪ್ರತ್ಯೇಕ ಆಡಳಿತದಲ್ಲಿವೆ. ಅಲ್ಲದೆ ದೇಶೀಯ ಕ್ರೈಸ್ತರು ಸ್ಥಾಪಿಸಿ ನಡೆಸುತ್ತಿರುವ 4 ಶಾಲೆಗಳಿವೆ. ಅಲ್ಲದೆ ವಸತಿ ನಿಲಯಗಳು, ನರ್ಸಿಂಗ್ ತರಬೇತಿ ಕೇಂದ್ರ, ಕಂಪ್ಯೂಟರ್ ತರಬೇತಿ ಕೇಂದ್ರಗಳು ಇದ್ದು ವಿದೇಶಿ ಮಿಶನರಿಗಳು ಪ್ರಾರಂಭಮಾಡಿದ ಹತ್ತು ಹಲವಾರು ಸಾಮಾಜಿಕ ಕಳಕಳಿಯ ಸೇವೆಯನ್ನು ಇವು ಇನ್ನೂ ಮುಂದುವರಿಸಿ ತುಳು ಜಿಲ್ಲೆಯಲ್ಲಿ ಸರ್ವರ ಸೇವೆಗೈಯುತ್ತಿದೆ.

ಕನ್ನಡ ಅಕ್ಷರ ಬಳಸಿ ಮೊದಲ ತುಳು ಮುದ್ರಣ. ಮೊದಲ ತುಳು ನಿಘಂಟು, ಮೊದಲ ತುಳುವ್ಯಾಕರಣ, ಮೊದಲ ಪಾಡ್ಡನ ಸಂಗ್ರಹ, ಮೊದಲ ಪ್ರೆಸ್, ಮೊದಲ ಕನ್ನಡ ಪತ್ರಿಕೆ, ಮೊದಲ ಶಾರ್ಟ್‌ ಹ್ಯಾಂಡ್ ಪುಸ್ತಕ, ಮೊದಲ ಕನ್ನಡ ಪಂಚಾಂಗ, ಮೊದಲ ದಾಸರ ಪದಗಳ ಮುದ್ರಣ, ಮೊದಲ ಕಾದಂಬರಿ ಮುದ್ರಣ, ಮೊದಲ ಮಂಗಳೂರು ಹಂಚು, ಮೊದಲ ಕಬ್ಬಿಣದ ಸೇತುವೆ, ಮೊದಲ ಖಾಕಿ ಬಟ್ಟೆ ಕಂಡುಹಿಡಿಯುವಿಕೆ, ಮೊದಲ ಶಾಲೆ, ಮೊದಲ ಕೃಷಿ ತರಬೇತಿ ಕೇಂದ್ರ, ಮಹಿಳೆಯರಿಗೆ ಉದ್ಯೋಗ, ಮೊದಲ ಕಿಂಡರ್ ಗಾರ್ಟನ್, ಮೊದಲ ರಾತ್ರಿ ಶಾಲೆ, ಮೊದಲ ವಸತಿ ಶಾಲೆ, ಹೀಗೆ ಪ್ರತಿಯೊಂದರಲ್ಲಿಯೂ ಮೊದಲಿಗರಾದ ಇವರು ತುಳುವರು ಮರೆಯಲಾಗದ ಮೊದಲಿಗರು ಎನ್ನುವುದಕ್ಕೆ ಯಾವುದೇ ಸಂಶಯವಿಲ್ಲ.

186 ವರ್ಷಗಳ ಹಿಂದೆ ವಿದೇಶಿಯರಿಂದ ಸ್ಥಾಪಿತವಾದ ಸಂಸ್ಥೆಯು ತುಳುನಾಡಿನಿಂದ ಕಾರವಾರದವರೆಗೆ, ಕಾಸರಗೋಡು, ಕೇರಳ, ನೀಲಗಿರಿ, ಹುಬ್ಬಳ್ಳಿ, ಧಾರವಾಡ, ಬೊಂಬಾಯಿ ಕಡೆಗಳಲ್ಲಿ ನೀಡಿದ ಕೊಡುಗೆ ಅಪಾರ. ವಿದೇಶಿ ಮಿಶನರಿಗಳು ಅಭಿವೃದ್ಧಿಯನ್ನು ಕೈಗೊಳ್ಳದ ಕಾರ್ಯಕ್ಷೇತ್ರವಿಲ್ಲವೆಂದರೆ ತಪ್ಪಾಗದು. ಇವೆಲ್ಲವೂ ಸಂಶೋಧನೆಗೆ ಯೋಗ್ಯವಾದ ವಿಚಾರವಾಗಿದ್ದು ಇನ್ನೂ ಹಲವಾರು ಬೆಳಕಿಗೆ ಬಾರದ ಕೊಡುಗೆಗಳು ಅವರ ಸೇವೆಗೆ ಮೂಕ ಸಾಕ್ಷಿಗಳಾಗಿವೆ.

04
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...