ಇಲ್ಲಿ ಮುದ್ರಣಗೊಂಡ ಹೆಚ್ಚಿನ ಕೃತಿಗಳು ಹಾಗೂ ಸ್ವಿಜರ್ಲೆಂಡಿನ ಬಾಸೆಲ್ ಪತ್ರಾಗಾರದಲ್ಲಿದ್ದ ಹಲವು ಕನ್ನಡ, ತುಳು, ಮಲಯಾಳಂ ಕೃತಿಗಳ ಮೈಕ್ರೋಫಿಲ್ಮ್ಗ್ಗಗಳು ಮಂಗಳೂರಿನ ಕರ್ನಾಟಕ ತಿಯೊಲಾಜಿಕಲ್ ಕಾಲೆಜ್ ಪತ್ರಾಗಾರದಲ್ಲಿದೆ. ಸಂಶೋಧಕರು ಈಗಲೂ ಇದರ ಉಪಯೋಗವನ್ನು ಪಡೆಯುತ್ತಿದ್ದಾರೆ. ಲಭ್ಯವಿರದ ಕೃತಿಗಳನ್ನು ಶೋಧಿಸಿ ಜೋಪಾನ ಮಾಡುವ ಕಾರ್ಯವನ್ನೂ ಕರ್ನಾಟಕ ತಿಯೊಲಾಜಿಕಲ್ ಕಾಲೇಜಿನ ಪತ್ರಾಗಾರವು ಕೈಗೊಂಡಿದೆ. ಇಲ್ಲಿ ಮುದ್ರಣವಾದ ನಿಘಂಟುಗಳು, ವ್ಯಾಕರಣಗಳು, ಭೂತಾರಾಧನೆ, ಸಂಗೀತ ಪುಸ್ತಕ ಮುಂತಾದವುಗಳು ಬೇರೆ ಬೇರೆ ಸಂಸ್ಥೆಗಳಿಂದ ಮರುಮದ್ರಣಗೊಳ್ಳುತ್ತಿವೆ. ಕ್ರೈಸ್ತ ಸಭೆಗೆ ಬೇಕಾದ ಪುಸ್ತಕಗಳಾದ, ಕನ್ನಡ ತುಳು ಸಂಗೀತ ಪುಸ್ತಕ, ಶ್ರಮಾವಾರದ ನಲ್ವತ್ತು ದಿನದ ದ್ಯಾನಗಳು, ಪ್ರಾರ್ಥನೆ ಪುಸ್ತಕ, ಕನ್ನಡ ತುಳು ಗೀತೆಗಳಿಗೆ ತಕ್ಕ ರಾಗಗಳು, ಎಲೀಮ್ ಬೋರಸ್ ಮುಂತಾದವುಗಳ ಮರುಮುದ್ರಣವನ್ನು ಈಗಲೂ ಪ್ರೆಸ್ ಕೈಗೊಳ್ಳುತ್ತಿದೆ. ಮರುಮುದ್ರಣ, ಸಂಶೋಧನೆ ಮುಂತಾದ ಎಲ್ಲಾ ಹಕ್ಕನ್ನು @ಮಿಶನ್ 21 (Mission 21) ಪರವಾಗಿ ಕರ್ನಾಟಕ ತಿಯೊಲಾಜಿಕಲ್ ಕಾಲೇಜ್, ಮಂಗಳೂರು ಹೊಂದಿದೆ.
ಕಳೆದ 43 ವರ್ಷಗಳಿಂದ ಕಾಸೆಸ್ ಸಂಸ್ಥೆಯ ಆಡಳಿತದಲ್ಲಿ ಮುಂದುವರಿಯುತ್ತಿರುವ ಮುದ್ರಣಾಲಯವು ಹಲವಾರು ಅಭಿವೃದ್ಧಿಯನ್ನು ಕಂಡಿದೆ. ಜರ್ಮನಿಯ ಹೈಡಲ್‌ಬರ್ಗ್‌ನ ಅಟೋಮ್ಯಾಟಿಕ್ ಸಿಲಿಂಡರ್, ಟ್ರೆಡಲ್ ಹ್ಯಾಂಡ್ ಫೀಡಿಂಗ್, ಮನೋಟೈಪ್ ಅಲ್ಲದೆ ಕಂಪ್ಯೂಟರ್‌ಗಳನ್ನು ತರಿಸಲಾಗಿದೆ. ಬಾಸೆಲ್ ಮಿಶನ್ ಪ್ರೆಸ್‌ನಲ್ಲಿದ್ದ ದೊಡ್ಡ ಸಿಲಿಂಡರ್ ಪ್ರಿಂಟಿಂಗ್, ಅಟೋಮ್ಯಾಟಿಕ್ ಪ್ರಿಂಟಿಂಗ್, ವಿಕ್ಟೋರಿಯಾ ಪ್ರಿಂಟಿಂಗ್ ಹ್ಯಾಂಡ್ ಫೀಡಿಂಗ್, ಅಲ್ಲದೆ 2 ಸಣ್ಣ ಪ್ರಿಂಟಿಂಗ್ ಯಂತ್ರಗಳು ಈಗಲೂ ಸುಸ್ಥಿತಿಯಲ್ಲಿದ್ದು ಅದರಲ್ಲಿಯೇ ಮುದ್ರಣ ಕಾರ್ಯಗಳು ನಡೆಯುತ್ತಿದೆ. ಬೈಂಡಿಂಗ್‌ಗಾಗಿ ಫೋಲ್ಡಿಂಗ್, ಬುಕ್ ರೌಂಡಿಂಗ್, ಬುಕ್ ಕಾರ್ನರ್, 2 ಕಟ್ಟಿಂಗ್ ಯಂತ್ರಗಳಿದ್ದು ಅವುಗಳೂ ಹಿಂದಿನವೇ. ಸ್ಕ್ರೀನ್ ಪ್ರಿಂಟಿಂಗ್, ಉತ್ತಮ ಬೈಂಡಿಂಗ್ ವ್ಯವಸ್ಥೆಯೂ ಇಲ್ಲಿದೆ. ಇಲ್ಲಿಯ ಅಚ್ಚು ಮೊಳೆಗಳ ಮುದ್ರಣ ಮತ್ತು ಉನ್ನತ ಮಟ್ಟದ ಬೈಂಡಿಂಗ್ ಈಗಲೂ ಹೆಸರುವಾಸಿಯಾಗಿದೆ. ಈಗ ಈ ಪ್ರೆಸ್ ಬಲ್ಮಠ ಇನ್ಸಿಟ್ಯೂಟ್ ಆಫ್ ಪ್ರಿಂಟಿಂಗ್ ಟೆಕ್ನಾಲಜಿ ಎಂಬ ಹೆಸರಿನಿಂದ ಕಾರ್ಯ ನಿರ್ವಹಿಸುತ್ತಿದೆ.