Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/162

From Wikisource
This page has been proofread.

ಕೃಷಿಯನ್ನೂ ನಡೆಸುತ್ತಿದ್ದಾರೆ. ಸರಕಾರದ ಉಳುವವನೆ ಹೊಲದೊಡೆಯ/ ಡಿಕ್ಲರೇಶನ್ ಕ್ರಮದಿಂದ ಹೆಚ್ಚಿನ ಆಸ್ತಿಗಳು ಅವರವರ ಪಾಲಾಗಿದೆ. ಬೊಲ್ಮದ ಬೇಸಾಯವು ದೊಡ್ಡ ಮಟ್ಟದಲ್ಲಿ ಸ್ವಾವಲಂಬನೆಗಾಗಿ ನಡೆಯುತ್ತಿತ್ತು. ಮಿಶನ್ ಆಸ್ತಿಯಲ್ಲಿರುವ ಕ್ರೈಸ್ತ ಕುಟುಂಬಗಳು ಸೇರಿ ಮಂಗಳೂರಿನ ಎಲ್ಲ ಕ್ರೈಸ್ತ ಸಭೆಗಳಿಗೆ ಬೆಳೆಹಬ್ಬದ ಸಂದರ್ಭದಲ್ಲಿ ಹಂಚಲಿಕ್ಕಾಗಿ ತೆನೆಯನ್ನು ಉಚಿತವಾಗಿ ಕೊಡುತ್ತಾರೆ. ಅಲ್ಲದೆ ಕ್ರೈಸ್ತರಲ್ಲದವರು ಬೆಳಹಬ್ಬದ ಆಚರಣೆಯಂದು ತಾವು ಬೆಳೆದ ಫಲ ವಸ್ತುಗಳನ್ನು ಕಾಣಿಕೆಯಾಗಿ ತಂದೊಪ್ಪಿಸುವ ಕ್ರಮವನ್ನು ಈಗಲೂ ಆಚರಿಸಿಕೊಂಡು ಬರುತ್ತಿದ್ದಾರೆ.

ಕುದ್ರೋಳಿ(ಬೊಕ್ಕಪಟ್ನ)ದಲ್ಲಿ ಶಾಲೆ, ದೇವಾಲಯ, ಹಂಚಿನ ಕಾರ್ಖಾನೆ ಇದ್ದುದರಿಂದ ನೂರಾರು ಮನೆಗಳು ಕ್ರೈಸ್ತರದ್ದಿದೆ. ಕಂಡತ್ತಪಳ್ಳಿ, ಬೊಕ್ಕಪಟ್ನ, ರಿವರ್‌ಸ್ಯೆಡ್, ಮೈಲಾರ್, ಬೋಳೂರು, ಮಠದಕಣಿ, ಅಶೋಕನಗರ ಕಡೆಗಳಲ್ಲಿ ಹಂಚಿನ ಕಾರ್ಖಾನೆಯ ನೌಕರರಿಗೆ ನೀಡಿದ ವಸತಿಗಳಾಗಿವೆ. ಹೆಚ್ಚಿನ ಕ್ರೈಸ್ತರು ಮಿಶನ್‌ ಆಸ್ತಿಯಲ್ಲಿದ್ದಾರೆ. ಮಂಗಳೂರಿನಲ್ಲಿರುವ ಸಭೆಗಳಲ್ಲಿ ಹೆಚ್ಚು ವಸತಿ ಇರುವ ಪ್ರದೇಶವೆಂದರೆ ಬೊಕ್ಕಪಟ್ಟವೇ ಆಗಿದೆ. ಅಶೋಕನಗರದಲ್ಲಿರುವ ಮಿಶನ್ ಆಸ್ತಿಯು ಕೋಮನ್‌ವಲ್ಸ್‌ವರ ಅಧೀನದಲ್ಲಿದ್ದು ತದನಂತರ ಅವರೇ ಅದನ್ನು ಅಲ್ಲಿನ ನಿವಾಸಿಗಳಿಗೆ ಮಾರಾಟ ಮಾಡಿದ್ದಾರೆ. ಈ ದೇವಾಲಯದ ವ್ಯಾಪ್ತಿಯ ವಸತಿ ಪರಿಸರದಲ್ಲಿ ಬಾಸೆಲ್ ಮಿಶನ್ ಹಂಚಿನ ಕಾರ್ಖಾನೆಯ ಇಟ್ಟಿಗೆಯಿಂದ ನಿರ್ಮಾಣವಾದ ಸುಮಾರು 5-6 ಬಾವಿಗಳು ಹಂಚಿನ ಕಾರ್ಖಾನೆಯ ಕಥೆಯನ್ನು ಹೇಳುತ್ತವೆ..

ಕಾರ್ಕಳ- ಕಾರ್ಕಳ ವ್ಯಾಪ್ತಿಯ ಮಾರ್ಪಾಡಿ, ಮೂಡಬಿದ್ರೆ, ನಿಟ್ಟೆ, ಸಾಣೂರು, ಕೆದಿಂಜೆ, ಮುಡಾರ್, ಮೂರೂರು, ಹೆರ್ಗಾನ, ನೀರೆಬೈಲೂರು, ಬನ್ನಡ್ಕ, ಸಾಲ್‌ಮರ, ಎರ್ಲಪಾಡಿ, ಮರ್ಣೆ, ಕೆರ್‌ವಾಶೆ, ಬೈಲೂರು, ಪರ್ಪಲೆ ಮುಂತಾದ ಕಡೆಗಳಲ್ಲಿ ಸುಮಾರು 600 ಎಕ್ರೆಗಳಿಗಿಂತಲೂ ಮಿಕ್ಕಿ ಅಸ್ತಿಗಳನ್ನು ಖರೀದಿಸಿದ್ದು ಮಾತ್ರವಲ್ಲದೆ ಸರಕಾರದ ದರಖಾಸ್ತುಗಳನ್ನೂ, ಊರವರ ಕೊಡುಗೆ ಮೂಲಕವೂ ಆಸ್ತಿ ಮಾಡಿದ್ದಾರೆ. ಮಿಶನ್ ಸೇವೆಗೆ ಜನ ಬೇಕಾದುದರಿಂದ ಕೆಲವರನ್ನು ಮುಲ್ಕಿಯಿಂದಲೂ ಇನ್ನು ಕೆಲವರನ್ನು ಪಾದೂರು, ಕುತ್ಯಾರ್‌ನಿಂದಲೂ ಕರೆದುಕೊಂಡು ಬ೦ದರು. ಪರ್ಪಲೆ ದೇವಾಲಯದ ಪೂರ್ವ ದಿಕ್ಕಿನಲ್ಲಿ ದರ್ಖಾಸುಗಳನ್ನು ಖರೀದಿಸಿ ಕ್ರೈಸ್ತ ಕುಟುಂಬಗಳಿಗೆ ನಿವಾಸಗಳನ್ನು ನಿರ್ಮಿಸಿ ಅವರಿಗೆ ಕೃಷಿ, ತೋಟಗಾರಿಕೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸಿದರು. ಕಾಡುಗಳನ್ನು

150

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು